ಗ್ರಾಮೀಣ ಪ್ರದೇಶಗಳಲ್ಲಿ ಮೇಕೆ ಅಥವಾ ಆಡುಗಳ ಆರ್ಥಿಕ ಉಪಯುಕ್ತತೆಯನ್ನು ಪರಿಗಣಿಸಿ ಅದನ್ನು “ಬಡವರ ಬಂಧು / ಬಡವರ ಹಸು / ಬಡವರ ಕಾಮಧೇನು / ನಡೆದಾಡುವ ಎ.ಟಿ.ಎಂ” ಹೀಗೆ ಹಲವಾರು ಅನ್ವರ್ಥಕ ನಾಮಗಳಿಂದ ಕರೆಯಲಾಗುತ್ತಿದೆ. ಆಡು ಸಾಕಾಣಿಕೆಯನ್ನು ಕಡಿಮೆ ವೆಚ್ಚದಲ್ಲಿ ಹಾಗೂ ಅಲ್ಪಾವಧಿಯಲ್ಲಿ ಆದಾಯ ತರುವ ಆರ್ಥಿಕ ಚಟುವಟಿಕೆಯಾಗಿದೆ. ಆಡು ಸಾಕಾಣಿಕೆಯು ಸಣ್ಣ ಮತ್ತು ಅತೀ ಸಣ್ಣ ರೈತರಿಗೆ, ಸ್ವಸಹಾಯ ಸಂಘುಗಳ ಮಹಿಳೆಯರಿಗೆ, ನಿರುದ್ಯೋಗಿ ಯುವಕರಿಗೆ ಯುವತಿಯರಿಗೆ ಜೀವನೋಪಾಯಕ್ಕೆ ಉದ್ಯೋಗವನ್ನು ಕಲ್ಪಿಸಿದೆ. ಮಾರುಕಟ್ಟೆಯಲ್ಲಿ ಆಡಿನ ಮಾಂಸದ ಬೇಡಿಕೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ಆಡು ಸಾಕಾಣಿಕೆಯನ್ನು ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದರಿಂದಾಗಿ ಆಡು ಸಾಕಾಣಿಕೆಯು ರೈತರ ಆರ್ಥಿಕ ಸುದಾರಣೆಗೆ ನೆರವಾಗುವ ಉದ್ಯಮವಾಗಿ ಬೆಳೆಯುತ್ತಿದೆ.
ಆಡುಗಳು ಅನುಪಯುಕ್ತ ವಸ್ತುಗಳನ್ನು ಉಪಯೋಗಿಸಿಕೊಂಡು ಪೌಷ್ಟಿಕ ಆಹಾರ (ಹಾಲು, ಮೌಂಸ), ಚರ್ಮ ಹಾಗೂ ಗೊಬ್ಬರ ಒದಗಿಸುತ್ತವೆ. ಇದಾಗಲೇ ಪ್ರಸ್ತಾಪಿಸಿದ ಹಾಗೆ ಆಡು ಬಡವರ ಆಕಳು ಎಂದು ಪರಿಗಣಿತವಾಗಿದೆ. ಆಡು ಸಾಕಲು ತಗಲುವ ಬಂಡವಾಳವೂ ಕಡಿಮೆ. ಇದು ಉತ್ತಮ ಹಾಗೂ ನಿರಂತರ ಆದಾಯ ಒದಗಿಸುತ್ತದೆ. ಯಾವುದೇ ವಿಶೇಷ ಜ್ಞಾನ ಹಾಗೂ ಕ್ಲಿಷ್ಟ ಕೌಶಲ್ಯಗಳ ಅವಶ್ಯಕತೆಯಿಲ್ಲದೇ ಕೈಗೊಳ್ಳಬಹುದಾದ ಒಂದು ಸ್ವ-ಉದ್ಯೋಗವಾಗಿದೆ. ಈ ಕೆಳಕಂಡ ಕೋಷ್ಟಕದಲ್ಲಿ ವಿವರಿಸಿದ ಹಾಗೆ ಮೇಕೆ ನಿಜವಾದ ಬಡವರ ಬಂಧು ಎಂದು ಹೇಳಬಹುದು.